ನನ್ನ ಬಗ್ಗೆ ತಿಳಿಯಬೇಕೆ ?

My photo
A guy with habit of learning from everyone and from anything... I would say i'm a guy hiding all my sorrows and sadness behind my "SMILE" :P Come in with me.. You should be able to write more "about me" :) ಭಾವನೆಗಳ ಲೋಕದಲ್ಲಿ ವಿಹರಿಸಲು ಇಷ್ಟ. ಒಂಟಿತನ ಹಿತವೆನಿಸುತ್ತದೆ, ಗುಂಪಿನಲ್ಲಿರುವಾಗ ಖುಷಿ. ಕನಸು ಕಾಣುವುದು ಕಡಿಮೆ, ನೆನಪುಗಳ ನಡುವೆ ಕನಸುಗಳು ಕಳೆದುಹೋಗುತ್ತವೆ.

Top 25 teachings of life in 25 years of my life!

ಜೀವನ ಎಲ್ಲರಿಗೂ ಗುರು. ಸಾಮಾನ್ಯವಾಗಿ ಗುರುವು ಪಾಠ ಹೇಳಿಕೊಟ್ಟು ಪರೀಕ್ಷೆ ಮಾಡಿದರೆ, ಜೀವನ ಸ್ವಲ್ಪ ಟ್ವಿಸ್ಟ್ ಕೊಡತ್ತೆ. ಅದು ಪರೀಕ್ಷೆ ಮಾಡಿ ನಂತರ ಪಾಠ ಹೇಳಿ  ಕೊಡತ್ತೆ. ಜೀವನದಲ್ಲಿ ಎಲ್ಲವನ್ನು ಸ್ವಂತ ಅನುಭವಗಳಿಂದಲೇ ಕಲಿಯಲು ಆಗುವುದಿಲ್ಲ. ಎಲ್ಲ ತಪ್ಪುಗಳನ್ನೂ ಮಾಡಿ ಅದರಿಂದ ಪಾಠ ಕಲಿಯುವಷ್ಟು ಆಯಸ್ಸು ನಮಗಿಲ್ಲ. ಆದ್ದರಿಂದ ಬೇರೊಬ್ಬರ ಅನುಭವಗಳು ನಮ್ಮ ಜೀವನಕ್ಕೆ ಆದರ್ಶವಾಗಬೇಕು. ಬೇರೊಬ್ಬರ ಅನುಭವಗಳು ನಮ್ಮ ಜೀವನಕ್ಕೆ ಪಾಠವಾಗಬೇಕು. ನನ್ನ ಈ ೨೫ ವಸಂತಗಳಲ್ಲಿ ನನ್ನ ಜೀವನದಲ್ಲಿ ನಾನು ಸ್ವಂತ ಕಲಿತ, ಬೇರೊಬ್ಬರ ಅನುಭವಗಳಿಂದ ಕಲಿತ ಕೆಲವು ಅನುಭವಗಳನ್ನು ಹಂಚಿಕೊಳ್ಳುತ್ತೇನೆ. ಅದರಿಂದ ಇನ್ನೊಬ್ಬರಿಗೆ ಸಹಾಯವಾದರೆ ಅದೇ ಈ ಲೇಖನದ ಸಾರ್ಥಕತೆ!

ಅನುಭವ ೧ : "बालादपि शुकादपि" , ಎಲ್ಲರನ್ನೂ ಎಲ್ಲವನ್ನೂ ಗುರುವಿನಂತೆ ಕಾಣಬೇಕು!
ಪ್ರತಿಯೊಬ್ಬ ವ್ಯಕ್ತಿಯಲ್ಲೂ, ಅಷ್ಟೇ ಏಕೆ ಪ್ರತಿಯೊಂದು ವಸ್ತುವಿನಲ್ಲೂ ಒಂದಲ್ಲಾ ಒಂದು ವಿಶೇಷತೆ ಇದ್ದೇ ಇರುತ್ತದೆ. ಆ ವ್ಯಕ್ತಿಯಿಂದ/ವಸ್ತುವಿನಿಂದ ನಾವು ತಿಳಿಯಬೇಕಾದ ಕಲಿಯಬೇಕಾದ ಸಂದೇಶಗಳು, ಅನುಭವಗಳು ಬಹಳಷ್ಟಿರುತ್ತದೆ. ನಮಗಿಂತ ಚಿಕ್ಕವರೇ ಆಗಲಿ ನಾವು ಕಲಿಯಬೇಕು. ಭಾಗವತದಲ್ಲಿ ಬರುವ "ಪ್ರಕೃತಿ ಪಾಠ" ಕೇಳಿ ಈ ಅನುಭವ ನನಗೆ ಬಂತು.

ಅನುಭವ ೨ : "कर्मण्येवाधिकारस्ते मा फलेषु कदाचन", ನಿನ್ನ ಕೆಲಸದಲ್ಲಿ ತೃಪ್ತಿ ಹೊಂದು, ಅದರ ಫಲದ ಬಗ್ಗೆ ಚಿಂತಿಸಬೇಡ!
ನಾವು ಏನೇ ಕೆಲಸ ಮಾಡಬೇಕಾದರೂ ಅದರ ಫಲಿತಾಂಶದ, ಅದರ ಉಪಯೋಗದ ಬಗ್ಗೆ ಯೋಚಿಸಿ ನಂತರ ಅದರಿಂದ ಉಪಯೋಗ ಇದ್ದರೆ ಮಾತ್ರ ಕೆಲಸ ಮಾಡುತ್ತೇವೆ! ೧೦೦ಕ್ಕೆ ೧೦೦ ಅಂಕ ಬರಬೇಕು ಎಂದು ಓದಿಕೊಂಡು ಪರೀಕ್ಷೆ ಬರೆದಾಗ, ೧೦೦ ಅಂಕ ಬರದಿದ್ದರೆ ಎಷ್ಟು ನೋವಾಗುತ್ತದೆ. ಆದರೆ ಅಂದುಕೊಳ್ಳದೇ ಓದಿಕೊಂಡು ಬರೆದಾಗ, ೧೦೦ ಅಂಕ ಬಂದರೆ ಅತ್ಯಂತ ಖುಷಿ ಆಗುತ್ತದೆ. ಬರದಿದ್ದರೆ ಅಷ್ಟೊಂದು ನೋವಾಗುವುದಿಲ್ಲ. ಜೀವನ ನಮಗೆ surprise ಕೊಡಬೇಕು ಎಂದುಕೊಂಡಾಗ ನಾವು ಹಾಳು ಮಾಡಿದರೆ ಚಂದವೇ?. ಶ್ರೀ ಕೃಷ್ಣನ ಭಗವದ್ಗೀತೆ ಇಂದ ನನಗೆ ಈ ಅನುಭವ ಬಂತು.

ಅನುಭವ ೩ : "आरोग्यं मूलमुत्तमं" , ಆರೋಗ್ಯವೇ ಭಾಗ್ಯ!
ನಾವು ದೈಹಿಕವಾಗಿ ಮಾನಸಿಕವಾಗಿ ಗಟ್ಟಿಯಾಗಿ ಇದ್ದರಷ್ಟೇ ಏನಾದರೂ ಸಾಧಿಸಲು ಸಾಧ್ಯ? ನಮ್ಮ ದೇಹವೇ ದೇವರ ಗುಡಿ. ಆರೋಗ್ಯವೇ ಅದರ ಧ್ವಜಸ್ತಂಭ. ಮನಸ್ಸೇ ಹೆಬ್ಬಾಗಿಲು. ಹೃದಯವೇ ಗರ್ಭ ಗುಡಿ. ಆತ್ಮನೇ ಅರ್ಚಕ. ಪ್ರೀತಿ ಸ್ನೇಹಗಳೇ ಹೂವುಗಳು. ನಮ್ಮ ನಂಬಿಕೆಯೇ ಆರತಿ. ಭಕ್ತಿಯೇ ಆಭರಣ! ಇಷ್ಟೆಲ್ಲಾ ಇರಬೇಕೆಂದರೆ ನಮ್ಮ ದೇಹ ಮನಸ್ಸು ಗಟ್ಟಿಯಾಗಿ ಇರಬೇಕು. ಬದುಕುವ ಹಂಬಲ ಇರಬೇಕು. ಬದುಕಿ ಸಾಧಿಸುವ ಛಲ ಇರಬೇಕು. ಯಾರೂ ಆತ್ಮಹತ್ಯೆಗೆ ಮುಂದಾಗಬೇಡಿ! ನನ್ನ ತಂದೆಯ ಮಾತುಗಳು ನನ್ನ ಈ ಅನುಭವಕ್ಕೆ ಕಾರಣ.

ಅನುಭವ ೪ : "सुखे दुखे समो भूत्वा" , ಎಲ್ಲವನ್ನೂ ಖುಷಿ ಇಂದ ಅನುಭವಿಸು!
ಸುಮ್ಮನೆ ನನಗೆ ಅದು ಬೇಕು ಇದು ಬೇಡ ಎಂದು ಕೊರಗುವುದಕ್ಕಿಂತ ನಿನ್ನ ಬಳಿ  ಏನಿದೆಯೋ ಅದನ್ನೇ ಇಷ್ಟಪಟ್ಟು ಖುಷಿ ಇಂದ ಇದ್ದರೆ ಎಷ್ಟು ಚಂದ? ಆಸೆಯೇ ದುಃಖಕ್ಕೆ ಮೂಲ ಅಲ್ಲವೇ? ಸುಖ ಆದಾಗ ಹಿಗ್ಗುವುದು ದುಖ ಆದಾಗ ಕುಗ್ಗುವುದು ಸರಿಯಲ್ಲ. ಕಷ್ಟ ಬಂದಾಗ ವೆಂಕಟ ರಮಣ ಎನ್ನುವುದು, ಸುಖ ಬಂದಾಗ ಗರ್ವ ಪಡುವುದರಲ್ಲಿ ಅಥವಿಲ್ಲ. ಸುಖವಾಗಲಿ ಬಹು ದುಃಖವಾಗಲೀ ಸಖ ನೀನಾಗಿರು ಪಾಂಡುರಂಗ ಎನ್ನುವ ನಿಷ್ಠೆ ಇರಬೇಕು. ಭಗವದ್ಗೀತೆ ಮತ್ತು ದಾಸರ ಪದಗಳಿಂದ ನನಗೆ ಈ ಅನುಭವ ಬಂತು.

ಅನುಭವ ೫ : "शीलं परम् भूषणं" , ಮಾನವಂತನಾಗಿ ಬದುಕಬೇಕು!
ಹಣ ಹೋದರೆ ಏನೂ ಹೋದಂತೆ ಅಲ್ಲ. ಆರೋಗ್ಯ ಹೋದರೆ ಏನೋ ಹೋದಂತೆ. ಆದರೆ ಮರ್ಯಾದೆ ಹೋದರೆ ಎಲ್ಲವೂ ಹೋದಂತೆ. ಸ್ವೇಚ್ಚಾಚಾರದ ಬದುಕಿನಲ್ಲಿ ಅರ್ಥವಿಲ್ಲ. ಪಾಶ್ಚಾತ್ಯರನ್ನು ಹಿಂಬಾಲಿಸುವ ನಾಯಿಗಳಾಗದೇ ನಮ್ಮ ಸನಾತನ ಸಂಸ್ಕೃತಿ ನಮ್ಮ ಧರ್ಮದ ಹಾದಿಯಲ್ಲಿ ಬದುಕುವುದೇ ಉತ್ತಮ. ನಮ್ಮ ಹಿರಿಯರಿಂದ ಬಂದ ಅನುಭವ.

ಅನುಭವ ೬ : "विद्या ददाति विनयम्" , ವಿದ್ಯೆ ಇದ್ದರಷ್ಟೇ ಸಾಲದು ವಿನಯ, ವಿವೇಕ ಇರಬೇಕು!
೩-೪ ಪದವಿಗಳನ್ನು ಮುಗಿಸಿ ಅತೀ ಹೆಚ್ಚು ವಿದ್ಯಾವಂತ ಆದರೆ ಎಲ್ಲವನ್ನೂ ತಿಳಿದರಷ್ಟೇ ಉಪಯೋಗವಾಗದು. ಅದನ್ನು ಸಮಾಜಕ್ಕೆ ಉಪಯೋಗವಾಗುವ ರೀತಿಯಲ್ಲಿ ಬಳಸುವ ವಿವೇಕ ಇರಬೇಕು, ವಿನಯ ಇರಬೇಕು. ಸುಮ್ಮನೆ ಸುಭಾಷಿತಗಳಿಂದ ಬಂದ ಅನುಭವ.

ಅನುಭವ ೭ : "वचने का दरिद्रता", ಸತ್ಯವಾದ ಪ್ರಿಯವಾದ ಮಾತಿಗೇನು ಬರ?!
ನಾಲಿಗೆಯಲ್ಲೇ ಜೀವನವಿದೆ, ನಾಲಿಗೆಯಲ್ಲೇ ಮೃತ್ಯುವಿದೆ! ಎಲ್ಲಿ ಎಷ್ಟು ಯಾವ ಮಾತನ್ನು ಹೇಗೆ ಆಡಬೇಕು ಎಂದು ತಿಳಿದವನೇ ಜಾಣ! ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎನ್ನುವಂತೆ ಕೆಟ್ಟ ಮಾತನ್ನು ಆಡಿ ಪಶ್ಚಾತ್ತಾಪ ಪಟ್ಟರೆ ವ್ಯರ್ಥ! ನಾಲ್ಕು ಜನರಿಗೆ ಉಪಯೋಗವಾಗುವ, ಸಂತೋಷ ಕೊಡುವ ಮಾತನ್ನು ಆಡಬೇಕು. ಇನ್ನೊಬ್ಬರ ಮನಸ್ಸಿಗೆ ನೋವಾಗದಂತೆ ಮಾತನಾಡಬೇಕು. ಸುಭಾಷಿತಗಳಿಂದ ಬಂದ ಅನುಭವ.

ಅನುಭವ ೮ : "ನಗುವು ಸಹಜ ಧರ್ಮ, ನಗಿಸುವುದು ಪರಧರ್ಮ"!
ಜೀವನ ಅಂದರೆ ನಮ್ಮೊಳಗಿರುವ ಜೀವನಿಗೂ ಹೊರಗಿರುವ ಪ್ರಕೃತಿಗೂ ಯುದ್ಧ! ಆಶ್ಚರ್ಯ ಎಂದರೆ ಈ ಯುದ್ಧದಲ್ಲಿ ಶಸ್ತ್ರ ಅಸ್ತ್ರ ಬೇಕಿಲ್ಲ. ಗೆಲ್ಲಲು ನಗುವು ಸಾಕು. ಮನದಲ್ಲಿ ಸಾವಿರ ನೋವಿದ್ದರೂ ಸುಮ್ಮನೆ ಮುಖದಲ್ಲಿ ಮಂದಹಾಸ ಇಟ್ಟುಕೊಂಡರೆ ಆ ನೋವಿಗೆ ಪರಿಹಾರ ಸಿಗುತ್ತದೆ! ಯಾವ ದಿನ ಒಬ್ಬ ನಗುವುದಿಲ್ಲವೋ ಆ ದಿನ ಆ ಮನುಷ್ಯ ಜೀವನದ ಯುದ್ಧದಲ್ಲಿ ಸೋತಂತೆ! ತಾನೂ ನಕ್ಕು ಪರರನ್ನೂ ನಗಿಸುವವನೇ ನಿಜವಾದ ಹೋರಾಟಗಾರ! ಡಿ.ವಿ.ಜಿ. ಪದ್ಯದಿಂದ ಬಂದ ಅನುಭವ!

ಅನುಭವ ೯ : "स्वधर्मे निधनम् श्रेयः", ನಿನ್ನತನವನ್ನು ಬಿಟ್ಟುಕೊಡಬೇಡ!
ಇನ್ನೊಬ್ಬರಿಗಾಗಿ ನಿನ್ನ ಸಂತೋಷ ತ್ಯಾಗ ಮಾಡು ಆದರೆ ಇನ್ನೊಬ್ಬರಿಗಾಗಿ ನಿನ್ನತನವನ್ನು ಬಿಟ್ಟುಕೊಡಬೇಡ. ನೀನು ನೀನಾಗಿರು. ನೀನು ಇನ್ನೊಬ್ಬರಂತಾಗಲು ಹೋಗಿ ನಗೆಪಾಟಲಿಗೆ ಈಡಾಗಬೇಡ! ಹಣ, ಹೆಣ್ಣು, ಮಣ್ಣು ಅಂತ ಪರಮತಾಂಧನಾಗದೇ ನಿನ್ನ ಧರ್ಮ ನೀ ಪಾಲಿಸು! ಭಗವದ್ಗೀತೆ ಇಂದ ಬಂದ ಅನುಭವ!

ಅನುಭವ ೧೦ : "ಮನಸ್ಸಿನ ಕೈಗೆ ಬುದ್ಧಿ ಕೊಡಬೇಡ"!
ಜೀವನ ರಥದ ಚಕ್ರ ಇದ್ದಂತೆ. ರಥದ ಚಕ್ರದಂತೆ ಜೀವನ ಚಕ್ರ ಉರುಳುತ್ತಾ ಇರುತ್ತದೆ. ನಾವು? ರಥದಲ್ಲಿ ಕುಳಿತು ಹೋಗುತ್ತಿರುವ ರಾಜರು. ನಮ್ಮಇಂದ್ರಿಯಗಳೇ ರಥದ ಕುದುರೆಗಳು. ನಮ್ಮ ಮನಸ್ಸೇ ಆ ಕುದುರೆಗಳನ್ನು ಕಟ್ಟಿ ಹಾಕುವ ಹಗ್ಗ. ನಮ್ಮ ಬುದ್ಧಿಯೇ ನಮ್ಮ ಸಾರಥಿ. ಮನಸ್ಸಿನ ಕೈಗೆ ಬುದ್ಧಿ ಕೊಟ್ಟರೆ ನಾವು ಜೀವನವನ್ನು ಆಳುವ ಬದಲು ನಮ್ಮನ್ನೇ ಜೀವನ ಆಳುತ್ತದೆ. ನಿನ್ನನ್ನು ನೀನು ನಿಯಂತ್ರಿಸಿಕೋ! ಉಪನಿಷತ್ತುಗಳಿಂದ ಬಂದ ಅನುಭವ!

ಅನುಭವ ೧೧ : "ಸಾಕ್ಷೀ ಎಂದಿಗೂ ಸುಳ್ಳಾಡುವುದಿಲ್ಲ"!
ಒಂದು ತಪ್ಪು ಮಾಡುವಾಗ ಮನಸ್ಸು provoke ಮಾಡಿದರೂ ನಿನ್ನೊಳಗಿನ ಸಾಕ್ಷೀ ನಿನ್ನನ್ನು ಎಚ್ಚರಿಸುತ್ತಿರುತ್ತದೆ. ಮನಸ್ಸಿನ ಮಾತನ್ನು ಕೇಳದೇ ಸಾಕ್ಷಿಯ ಮಾತಿಗೆ ಕಿವಿಯಾಗಬೇಕು. ಸಾಕ್ಷಿಯ ಮಾತು ಅಷ್ಟು ಸುಲಭವಾಗಿ ಕೇಳುವುದಿಲ್ಲ. ಪ್ರತಿನಿತ್ಯ ನಿನ್ನ ಬಗ್ಗೆ ನೀನು ಆತ್ಮಾವಲೋಕನ ಮಾಡಿಕೊ. ನಿನ್ನನ್ನು ನೀನು ಕೇಳು, ನಿನ್ನ ತಪ್ಪುಗಳಿಗೆ ನಿನ್ನನ್ನು ನೀನು ಹಳಿದುಕೋ! ಹಾಗೇ ಸುಮ್ಮನೇ ಬಂದ ಅನುಭವ!

ಅನುಭವ ೧೨ : "Spread the love"!
ಎಂಥಹ ಶತ್ರುಗಳನ್ನೂ ಪ್ರೀತಿಯಿಂದ ಗೆಲ್ಲಬಹುದು. ದ್ವೇಷಕ್ಕಿಂತ ಈ ಜಗತ್ತು ಪ್ರೀತಿಯನ್ನು ಬಯಸುತ್ತದೆ. ಎಲ್ಲರಿಗೂ ಒಂದೇ ಸಮನಾದ ಪ್ರೀತಿಯಲ್ಲ. ಅದಕ್ಕೆ ಸಾವಿರಾರು ರೂಪಗಳಿವೆ! ಉದಾಹರಣೆಗೆ, ಮಕ್ಕಳಲ್ಲಿ ಅವರಂತೆ ಇರುವುದು,ತಂದೆ-ತಾಯಿಯರಲ್ಲಿ ಸೇವಾ ಮನೋಭಾವ,  ಗುರು-ಹಿರಿಯರಲ್ಲಿ ಗೌರವ, ಸ್ನೇಹಿತರಲ್ಲಿ ತಮಾಷೆಯ ಒಡನಾಟ, ಭಿಕ್ಷುಕರಲ್ಲಿ ದಾನ, ಹೆಣ್ಣಿನಲ್ಲಿ ಭ್ರಾತೃ ಭಾವನೆ, ಹೆಂಡತಿಯಲ್ಲಿ ಪ್ರೇಮ-ಕಾಮ! ಅವರಿವರನ್ನು ನೋಡಿ ಬಂದ ಅನುಭವ!

ಅನುಭವ ೧೩ : "ನಾಳೆಯ ಬಗ್ಗೆ ಹೆಚ್ಚು ಯೋಚಿಸಬೇಡ"!
ಇರುವೆಗಳೆಲ್ಲ ಸೇರಿ ನಾಳೆ ಚನ್ನಾಗಿ ಇರಬೇಕೆಂದು ಗೂಡು ಕಟ್ಟುತ್ತವೆ! ಅದನ್ನು ಹಾವು ಆಕ್ರಮಿಸುತ್ತದೆ! ಅದು ಪ್ರಕೃತಿ ವೈಚಿತ್ರ್ಯ! ಆದರೆ ನಾವು ಮನುಷ್ಯರು. ವಿವೇಕ ಇರುವವರು. ನೆನ್ನೆಯ ಚಿಂತೆಗೆ ನಾಳೆಯ ಕನಸನ್ನು ಕಾಣುತ್ತಾ ಇಂದಿನ ಸುಖವನ್ನು ಹಾಳು ಮಾಡಿಕೊಳ್ಳಬಾರದು! ಸುಭಾಷಿತಗಳಿಂದ ಬಂದ ಅನುಭವ!

ಅನುಭವ ೧೪ : "चिता दहति निर्जीवं चिन्ता दहति जीविनं", ಚಿತೆ ಸತ್ತವರನ್ನು ಸುಟ್ಟರೆ, ಚಿಂತೆ ಬದುಕಿದವರನ್ನು ಸುಡುತ್ತದೆ!
ಅತಿಯಾಗಿ ಯೋಚನೆ ಅತಿಯಾಗಿ ಚಿಂತೆ ಮಾಡುವುದನ್ನು ಬಿಟ್ಟು ಈಗ ಏನಿದೆಯೋ ಅದರಲ್ಲಿ ಸಂತೋಷವಾಗಿರಬೇಕು. ಚಿಂತೆ ಯಾಕೆ ಮಾಡುತಿದ್ದೀ ಚಿನ್ಮಯನಿದ್ದಾನೆ ಎಂದು ನೆಮ್ಮದಿಯಿಂದ ನೋವನ್ನೆಲ್ಲ ದೇವರು ಪರಿಹರಿಸುತ್ತಾನೆ ಎಂದು ಖುಷಿ ಇಂದ ಇರಬೇಕು! ಸುಭಾಷಿತಗಳು, ದಾಸರ ಪದಗಳಿಂದ ಬಂದ ಅನುಭವ!

ಅನುಭವ ೧೫ : "ಹೇಳಿದ್ದನ್ನು ಮಾಡು, ಮಾಡಿದ್ದನ್ನು ಮಾಡಬೇಡ"!
ದೊಡ್ಡವರು ನಮಗೆ ಅನೇಕ ರೀತಿಯ ಮಾರ್ಗದರ್ಶನ ಮಾಡುತ್ತಾರೆ. ನಾವು ಎರಡಕ್ಷರ ಕಲಿತ ತಕ್ಷಣ ಅವರನ್ನೇ ಪ್ರಶ್ನಿಸುತ್ತೇವೆ. ನೀವೇ ಮಾಡಿಲ್ಲ ನಾನೇನೆ ಮಾಡಲಿ ಎಂದು ಹುಂಬತನ ತೋರಿಸುತ್ತೇವೆ. ಅವರು ಹೇಳಿದ್ದನ್ನು ಮಾಡಬೇಕೇ ಹೊರತು ತಪ್ಪು ಕಂಡು ಹಿಡಿದು ಪ್ರಶ್ನಿಸಬಾರದು! ಹೇಗೋ ಬಂದ ಅನುಭವ!

ಅನುಭವ ೧೬ : "ದೇವರಲ್ಲಿ ನಂಬಿಕೆ ಇಡು, ನಿನ್ನ ನೀನು ಪ್ರೀತಿಸು"
ದೇವರಿದ್ದಾನೋ ಇಲ್ಲವೋ ಎಂದು ತರ್ಕ ಮಾಡುವ ಬದಲು, ದೇವರನ್ನು ನಂಬು. ಅನುಭವಕ್ಕೆ ಬಂದ ಮೇಲೆ ನಿಶ್ಚಯ ಮಾಡಿಕೊ. ದೇವರ ಹೆಸರಲ್ಲಿ ವಂಚಿಸುವವರಿಗೆ, ಮೂಢ ನಂಬಿಕೆಗಳಿಗೆ ಬಲಿಯಾಗದೇ ನಿನ್ನೊಳಗೇ ಇರುವ ದೇವರನ್ನು ಪ್ರೀತಿಸು, ಆಗ ನಿನಗೆ ನಿನ್ನ ಬಗ್ಗೆ ಪ್ರೀತಿ ಮೂಡುತ್ತದೆ! ದೇವರಲ್ಲಿ ಭಕ್ತಿ ಮೂಡುತ್ತದೆ! ತರ್ಕಕ್ಕೆ ನಿಲುಕದ ಅನುಭವ!

ಅನುಭವ ೧೭ : "An empty mind is devil's workshop", ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊ!
ಮನುಷ್ಯ ಒಂಟಿ ಜೀವಿಯಲ್ಲ. ಸಹಜೀವಿ! ಆದರೆ ಆಗಾಗ ಕಾಡುವ ಒಂಟಿತನಕ್ಕೆ ಒಳ್ಳೆ ಮದ್ದು ಎಂದರೆ ಉತ್ತಮ ಹವ್ಯಾಸಗಳು. ಸಂಗೀತ, ನೃತ್ಯ, ಚಿತ್ರಕಲೆ, ಅಭಿನಯ, ಕ್ರೀಡೆ ಮುಂತಾದ ಹವ್ಯಾಸಗಳನ್ನು ಬೆಳೆಸಿಕೊಂಡು ನಿನ್ನ ಒಂಟಿತನದಲ್ಲಿ ಮನಸ್ಸು ಹಿಡಿತ ತಪ್ಪದಂತೆ ನೋಡಿಕೋ! ಸ್ವಂತ ಅನುಭವ!

ಅನುಭವ ೧೮ : "ತಾಳುವಿಕೆಗಿಂತೆನ್ನ ತಪವು ಇಲ್ಲ"!
ಸಹನೆ ತಾಳ್ಮೆ ಇದ್ದರೆ ಬದುಕು ಹಸಿರಾಗಿರುತ್ತದೆ. ಕಷ್ಟ ಬಂದಾಗ ಸುಖ ಬರುವವರೆಗೂ ತಾಳು. ಶಾಶ್ವತವಲ್ಲದ ಕಷ್ಟ-ಸುಖಕ್ಕಾಗಿ ಒದ್ದಾಡದೇ ಮುಕ್ತಿಗಾಗಿ ದೇವರು ನಡೆಸುವ ಪರೀಕ್ಷೆಯಲ್ಲಿ ಸಹನೆ ತಾಳ್ಮೆಯ ಉತ್ತರ ಕೊಡು! ದಾಸರ ಪದಗಳಿಂದ ಬಂದ ಅನುಭವ!

ಅನುಭವ ೧೯ : "ಮುಗ್ಧತೆ ಇರಲಿ, ತಪ್ಪು ಮಾಡೋದು ಸಹಜ ಕಣೋ, ತಿದ್ದಿ ನಡೆಯೋನೆ ಮನುಜ ಕಣೋ"!
ತಪ್ಪು ಮಾಡುವ ಮೊದಲು ಮುಗ್ಧತೆ ಇರಲಿ. ಮುಗ್ಧತೆ ಇರದೇ ತಪ್ಪಾದರೆ ಆ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳು. ತಪ್ಪನ್ನೆ ಸಮರ್ಥಿಸಿಕೊಳ್ಳುವ ದೊಡ್ಡ ತಪ್ಪು ಮಾಡುವುದು ವ್ಯರ್ಥ! ಮತ್ತೆ ಮತ್ತೆ ಅದೇ ತಪ್ಪು ಮಾಡುವುದಿಲ್ಲ ಎಂದು ಶಪಥ ಮಾಡು. ಅವರಿವರ ನೋಡಿ ಬಂದ ಅನುಭವ!

ಅನುಭವ ೨೦ : "विद्वान् सर्वत्र पूज्यते, विद्या धनम् सर्वधनप्रधानम्"!, ವಿವೇಕ ಸಹಿತ ವಿದ್ಯೆ ನಿನ್ನ ಸಲಹುತ್ತದೆ!
ದುಡ್ಡಿಲ್ಲ ಹೇಗೆ ಬದುಕಲಿ ಎಂದು ಹತಾಶನಾಗಬೇಡ. ನಿನ್ನಲ್ಲಿರುವ ವಿವೇಕ ಸಹಿತ ವಿದ್ಯೆಯನ್ನು ಉಪಯೋಗಿಸಿಕೋ. ಎಲ್ಲಿ ಬೇಕಾದರೂ ಬದುಕಬಹುದು! ಸ್ವಂತ ಅನುಭವ!

ಅನುಭವ ೨೧ : "ಗರ್ವ ಬೇಡ, ಎಲ್ಲರೊಳಗೊಂದಾಗು ಮಂಕು ತಿಮ್ಮ"!
ನಾನು ಶ್ರೀಮಂತ, ನೀನು ಭಿಕ್ಷುಕ ಅಂತ ಗರ್ವ ತೋರದೇ ದಾನ ಮಾಡು. ಅವನೂ ಬದುಕಲಿ, ಇವನೂ ಬದುಕಲಿ, ಎಲ್ಲರೂ ಬದುಕಲಿ ಎಂಬ ಭಾವದಿಂದ ಎಲ್ಲರಿಗೂ ಅವರ ಯೋಗ್ಯತೆಗೆ ತಕ್ಕಂತೆ ಬದುಕಲು ಸಹಾಯ ಮಾಡು. ಸ್ವಂತ ಅನುಭವ!

ಅನುಭವ ೨೨ : "लोको भिन्नरुचिः", ಜಗತ್ತು ವೈವಿಧ್ಯಮಯ!
ಒಬ್ಬರಂತೆ ಇನ್ನೊಬ್ಬರು ಇಲ್ಲ. ಎಲ್ಲರೂ ಎಲ್ಲರನ್ನೂ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ. ಎಲ್ಲರೂ ಎಲ್ಲರನ್ನೂ ಖುಷಿ ಪಡಿಸಲು ಆಗುವುದಿಲ್ಲ. ಎಲ್ಲರೂ ಹೇಗಿದ್ದಾರೂ ಹಾಗೇ ಒಪ್ಪಿಕೊಳ್ಳುವುದು ದೊಡ್ಡ ಗುಣ. ಜನರನ್ನು ಬದಲಿಸಲು ಆಗುವುದಿಲ್ಲ ಎಂದ ಮೇಲೆ ಎಲ್ಲರನ್ನೂ ಓಲೈಸುವುದೂ ಕಷ್ಟ. ಧರ್ಮಕ್ಕೆ ಸಹಜವಾದ ರೀತಿಯಲ್ಲಿ ವರ್ತಿಸು. ಸ್ವಂತ ಅನುಭವ!

ಅನುಭವ ೨೩ : "ನೋವನ್ನು ಮನಸ್ಸಿನಲ್ಲಿ ತುಂಬಿಕೊಳ್ಳದೇ ಹೊರಹಾಕು, ಅತ್ತುಬಿಡು"!
ಮನಸ್ಸು ಪರಿಮಿತ ಶಕ್ತಿಯುಳ್ಳದ್ದು. ಹೊಸ ವಿಚಾರಗಳನ್ನು ತುಂಬಬೇಕು ಎಂದರೆ ಮೊದಲು ಹಳೆಯ ಹೊಲಸು ವಿಚಾರಗಳನ್ನು ತೆಗೆದು ಹಾಕಬೇಕು. ಅದಕ್ಕಾಗಿ ಮನಸ್ಸನ್ನು ಆಗಾಗ ಸ್ವಚ್ಛ ಮಾಡುತ್ತಿರು. ದೇವರಲ್ಲಿ, ನಿನ್ನಲ್ಲಿ, ನಿನ್ನ ಆಪ್ತರಲ್ಲಿ ನಿನ್ನ ನೋವನ್ನು ಹೊರಹಾಕು. ಅತ್ತು ಬಿಡು, ಮನಸ್ಸು ಹಗುರ ಮಾಡಿಕೋ! ಸ್ವಂತ ಅನುಭವ!

ಅನುಭವ ೨೪ : "ಅವರಿವರಿಗೆ ನಿನ್ನನ್ನು ಹೋಲಿಸಿಕೊಳ್ಳಬೇಡ"!
ಹೋಲಿಕೆ ಒಂದು ದೊಡ್ಡ ತಪ್ಪು. ಅವರಿಗೆ ಇದ್ದದ್ದು ನನಗಿಲ್ಲ ಎನ್ನುವ ಕೊರಗು ಅದರಿಂದಲೇ ಬರುತ್ತದೆ. ಕಾಲಿಲ್ಲದವರನ್ನು ನೋಡಿ ನಿನಗೆ puma ಚಪ್ಪಲಿ ಇಲ್ಲವಲ್ಲಾ ಎಂಬ ಕೊರಗನ್ನು ಬಿಡು. ಕಣ್ಣಿಲ್ಲದವರನ್ನು ನೋಡಿ ನಿನಗೆ cooling glass ಇಲ್ಲವಲ್ಲಾ ಎಂಬ ಕೊರಗನ್ನು ಬಿಡು. ಯಾರಿಗೆ ಏನೇ ಇರಲಿ ಬಿಡಲಿ ನಿನ್ನ ಹೃದಯವಂತಿಕೆ ಮೆರೆಯುವ ದೊಡ್ಡ ಗುಣ ಬೆಳೆಸಿಕೋ! ಸ್ವಂತ ಅನುಭವ!

ಅನುಭವ ೨೫ : ನಿಮಗೆ ಬಂದ ಅನುಭವಗಳನ್ನು ನನ್ನಂತೆ ಹಂಚಿಕೊಳ್ಳಿ :-)


Happy 25th birthday to me!






No comments:

Post a Comment